ಮಾಸ್ಪಿರೋ, ಗಾಸ್ಟನ್ ಕೆಮಿಲ್ ಚಾಲ್ರ್ಸ್
1846-1914. ಪ್ರಸಿದ್ಧ ಈಜಿಪ್ಟ್ ಶಾಸ್ತ್ರಜ್ಞ (ಈಜಿಪ್ಟಾಲಜಿಸ್ಟ್). ಜನ್ಮತಃ ಇಟಲಿಯವನಾದ ಈತ ಫ್ರಾನ್ಸಿನಲ್ಲಿ ವಿದ್ಯಾಭ್ಯಾಸ ನಡೆಸಿದ. ಎಕೊಲ್ ದೇಹೌತ್ ಎತುದೆಯಲ್ಲಿ ದ ರಾಗ್ ಎಂಬಾತನ ಸಹಾಯಕನಾಗಿ ಕೆಲಸ ಮಾಡಿದ ಈತ ಕಾಲೇಜ್ ದೆ. ಫ್ರಾನ್ಸ್‍ನಲ್ಲಿ ಪ್ರಾಧ್ಯಾಪಕನೂ ಆಗಿದ್ದ. ಪ್ರಾಚೀನ ಈಜಿಪ್ಟಿನ ಭಾಷೆಯ ಬಗ್ಗೆ ಈತನಿಗೆ ವಿಶೇಷ ಆಸಕ್ತಿಯಿತ್ತು. ಪ್ರಚಲಿತ ಜೀವಂತ ಪದಗಳೊಡನೆ ಪ್ರಾಚೀನ ಈಜಿಪ್ಷಿಯನ್ ಪದಗಳನ್ನು ಹೋಲಿಸಿ ನೋಡಿ ಅವನ್ನು ಹೇಗೆ ಉಚ್ಛರಿಸುತ್ತಿದ್ದರು ಎಂಬ ಬಗ್ಗೆ ಸಂಶೋಧನೆ ನಡೆಸಿದ.

	1881ರಲ್ಲಿ ಈಜಿಪ್ಪಿನ ಸರ್ವಿಸ್ ದೆ ಆ್ಯಂಟಿಕ್ವಿಟೀಸ್ ಎಂಬ ಸಂಸ್ಥೆಯ ನಿರ್ದೇಶಕನಾದ ಈತ ದರೋಡೆಕೋರರು, ದಲ್ಲಾಳಿಗಳು ಹಾಗೂ ನೈಸರ್ಗಿಕ ಕಾರಣಗಳಿಂದ ನಾಶವಾಗುತ್ತಿದ್ದ ಈಜಿಪ್ಪಿನ ಪ್ರಾಚೀನ ಸ್ಮಾರಕಗಳನ್ನು ಸಂರಕ್ಷಿಸುವ ಕೆಲಸಕಾರ್ಯಗಳನ್ನು ತೊಡಗಿದ; ಜೊತೆಗೆ ಹೊಸ ಉತ್ಖನನಗಳನ್ನೂ ನಡೆಸಿದ. ಉನಸ್, ಇಮ್ಮಡಿ ಪೇಪಿ ಹಾಗೂ ಟೇಟಿ-ಇವರ ಪಿರಮಿಡ್ಡುಗಳನ್ನು ತೆರೆದು ಅವುಗಳಲ್ಲಿಯ ಶಾಸನ ಪಾಠಗಳನ್ನು ಓದಿದ. 1881ರ ಜೂನಿನಲ್ಲಿ, ಅಂದರೆ ಇವನ ಕಾಲಾವಧಿಯಲ್ಲಿಯೇ ಮಹತ್ವದ ಅನ್ವೇಷಣೆಯೊಂದು ನಡೆಯಿತು. ಅನೇಕ ವರ್ಷಗಳಿಂದ ಕಾನೂನು ಬಾಹಿರ ಉತ್ಖನನಗಳಲ್ಲಿಯೂ ಪುರಾತನ ವಸ್ತುಗಳ ವ್ಯಾಪಾರದಲ್ಲಿಯೂ ನಿರತವಾಗಿದ್ದ ಅಬ್ದ್ ಎಲ್ ರಸೂಲ್ ಕುಟುಂಬದ ಸದಸ್ಯನೊಬ್ಬ ವಂಶಪಾರಂಪರ್ಯವಾಗಿ ರಕ್ಷಿಸಿಕೊಂಡು ಬಂದಿದ್ದ ತಮ್ಮ `ನಿಧಿಯ ಸ್ಥಳವನ್ನು ಅಧಿಕಾರಿಗಳಿಗೆ ಬಹಿರಂಗಪಡಿಸಿದ. ಇಪ್ಪತ್ತೊಂದನೆಯ ವಂಶದ ಆಳ್ವಿಕೆಯ ಕಾಲದಲ್ಲಿ ಮೂವತ್ನಾಲ್ಕು ದೊರೆಗಳ ಸಮಾಧಿಗಳು ದರೋಡೆಕೋರರ ದಾಳಿಗೀಡಾಗಿದ್ದವು; ಆದರೆ ಅರ್ಚಕವರ್ಗದವರು ಈ ದೊರೆಗಳ ದೇಹಗಳನ್ನು ಶವಸಂಸ್ಕಾರ ವಸ್ತುಗಳೊಡನೆ ಬೇರೊಂದೆಡೆ-ಡೆರ್ ಎಲ್ ಬಹ್ರಿ ಎಂಬಲ್ಲಿ ಬಚ್ಚಿಟ್ಟಿದ್ದರು. ಇದನ್ನು ಬೆಳಕಿಗೆ ತರುವಲ್ಲಿ ಮಾಸ್ಟಿರೋ ಯಶಸ್ವಿಯಾದ. ಸಕಾರ ಎಂಬಲ್ಲಿ ಉತ್ಖನನಗಳನ್ನು ಮುಂದುವರಿಸಿದ ಈತ ಗೀಜಾದ ಸ್ಟಿಂಕ್ಸ್ ಸ್ಮಾರಕದಸುತ್ತ ಆವರಿಸಿದ್ದ ಮರಳರಾಶಿಯನ್ನು ತೆಗೆಸಲು ಆಜ್ಞೆ ಮಾಡಿದ. 1886ರಲ್ಲಿ ಸೇವೆಯಿಂದ ನಿವೃತ್ತನಾದ ಬಳಿಕ ತನ್ನ ಸಂಶೋಧನೆ ಕಾರ್ಯಗಳನ್ನು ಮೂರು ಸಂಪುಟಗಳಲ್ಲಿ ಹಿಸ್ಟರಿ ಆಫ್ ದಿ ಏನ್ಷಂಟ್ ಪೀಪಲ್ಸ್ ದಿ ಕ್ಲಾಸಿಕ್ ಈಸ್ಟ್ (1894-1900) ಎಂಬ ಶೀರ್ಷಿಕೆಯಲ್ಲಿ ಪ್ರಕಟಿಸಿದ. ಅನಂತರ ಕೈರೋದಲ್ಲಿ ರೂಪುಗೊಂಡ ಹೊಸ ವಸ್ತುಸಂಗ್ರಹಾಲಯದ ನಿರ್ದೇಶಕನಾದ. ಅಲ್ಲಿಯ ಸಂಗ್ರಹವಸ್ತುಗಳನ್ನು ಕುರಿತು ಸಂಶೋಧಕರಿಗೂ ಪ್ರವಾಸಿಗಳೂ ಉಪಯುಕ್ತವಾದ ಕೈಪಿಡಿಯೊಂದನ್ನು ರಚಿಸಿದ; ಸಂಗ್ರಹಾಲಯದ ವಿವಿಧ ಶಾಖೆಗಳಿಗೆ ಸಂಬಂಧಿಸಿದಂತೆ ಸೂಚಿಗಳನ್ನು ಸಂಕಲಿಸಲು ಪರಿಣತರನ್ನು ನೇಮಕಮಾಡಿದ. ಆಸ್ವಾನ್ ಅಣೆಕಟ್ಟಿನ ನಿರ್ಮಾಣದಿಂದ ಮುಳುಗಿ ಹೋಗಲಿದ್ದ ಫೆಲೇ ಎಂಬ ಸ್ಥಳದ ಸ್ಮಾರಕ, ಶಾಸನ ಮತ್ತು ಇತರ ನ್ಯುಬಿಯನ್ ದೇಗುಲಗಳಿಗೆ ಸಂಬಂಧಿಸಿದ ಸಂಪೂರ್ಣ ವಿವರಗಳನ್ನು ಸಿದ್ಧಪಡಿಸಲು ಆಸಕ್ತಿ ತಳೆದ. ಈತನ ಮಾರ್ಗದರ್ಶನದಲ್ಲಿ ಕೆಲಸ ಮಾಡಿದ ಈಜಿಪ್ಟ್ ಶಾಸ್ತ್ರಜ್ಞರು `ಲೆ ಟೆಂಪಲ್ಸ್. ಇಮರ್ಜಸ್‍ದ ಲ ನ್ಯೂಬಿ (1911) ಎಂಬ ಸರಣಿಯಲ್ಲಿ ತಮ್ಮ ಸಂಶೋಧನೆಗಳ ಸಾರವನ್ನು ಪ್ರಕಟಿಸಿದರು.

	ಈಜಿಪ್ಪಿನಲ್ಲಿ ನಡೆಯುತ್ತಿದ್ದ ಸ್ವೇಚ್ಚೆಯಾದ ಉತ್ಖನನಗಳಲ್ಲಿ ತಡೆಯುವಲ್ಲಿ ಸರ್ಕಾರದ ಬೆಂಬಲ ಪಡೆಯಲು ಮಾಸ್ಟಿರೋ ತುಂಬು ಪ್ರಯತ್ನ ನಡೆಸಿದನಾದರೂ ಸಫಲವಾಗಲಿಲ್ಲ. ಪುರಾತನ ವಸ್ತುಗಳ ಬಗ್ಗೆ ಹೆಚ್ಚಿನ ವೈಜ್ಞಾನಿಕ ಆಸಕ್ತಿ ಬೆಳೆಸಲು ಹಾಗೂ ಅವುಗಳ ವ್ಯಾಪಾರ ರಫ್ತುಗಳನ್ನು ತಡೆಯಲು ಈಜಿಪ್ಪಿನ ಅನೇಕ ಸ್ಥಳಗಳಲ್ಲಿ ಈತ ವಸ್ತುಸಂಗ್ರಹಾಲಯಗಳನ್ನು ಸ್ಥಾಪಿಸಿದ. 1912ರಲ್ಲಿ ವಸ್ತುಸಂಗ್ರಹಾಲಯದ ನಿರ್ದೇಶಕ ಹುದ್ದೆಯಿಂದ ನಿವೃತ್ತನಾದ. ಎರಡು ವರ್ಷಗಳ ಅನಂತರ ಅಕಾಡೆಮಿ ದೆ ಇನ್‍ಸ್ಕ್ರೀಪ್ಷನ್ಸ್ ಎತ್ ಬೆಲ್ಲೆ. ಲೆಟರ್ಸ್ ಎಂಬ ಸಂಸ್ಥೆಯ ಕಾರ್ಯದರ್ಶಿಯಾದ. 1914ರಲ್ಲಿ ಆಕಸ್ಮಿಕ ಮರಣ ಹೊಂದಿದ.
 (ಎಚ್.ಎಂ.ಎನ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ